ಕ್ಷೇತ್ರಕಾರ್ಯ (ಭಾಷಾವಿಜ್ಞಾನ)

ಲಿಪಿ ಇಲ್ಲದ ಭಾಷೆಗಳ ವೈಜ್ಞಾನಿಕ ಅಧ್ಯಯನ ಮತ್ತು ವಿಶ್ಲೇಷಣೆಗೆ ಯೋಗ್ಯವಾದ ಸಾಮಗ್ರಿಯನ್ನು ಸ್ಥಳಕ್ಕೇ ಹೋಗಿ ಸಂಗ್ರಹಿಸುವ ಕ್ರಮವನ್ನು ಇಲ್ಲಿ ಪರಿಶೀಲಿಸಲಾಗಿದೆ [ಫೀಲ್ಡ್ ವರ್ಕ್ (ಲಿಂಗ್ವಿಸ್ಟಿಕ್). ಭಾಷೆಯ ಅಧ್ಯಯನ ಕಾರ್ಯ ಬಹು ಹಿಂದಿನಿಂದಲೂ ನಡೆದು ಬಂದಿರುವುದೇನೋ ನಿಜ. ವ್ಯಾಕರಣಶಾಸ್ತ್ರದಿಂದ ಹುಟ್ಟಿಕೊಂಡ ಭಾಷಾವಿಜ್ಞಾನ ಕವಲೊಡೆದು ನಾನಾ ಶಾಖೆಗಳಾಗಿ ಬೆಳೆದು ಬೆಳಕಿಗೆ ಬರುತ್ತಿದೆ. ಹಿಂದೆ ಭಾಷಾಧ್ಯಯನ ಭಾಷೆಯ ಐತಿಹಾಸಿಕ ಹಾಗೂ ತುಲನಾತ್ಮಕ ಅಧ್ಯಯನಕ್ಕೆ ಮಾತ್ರ ಸೀಮಿತವಾಗಿತ್ತು. ಅಲ್ಲದೆ ಭಾಷಾವಿಜ್ಞಾನ ತನ್ನ ಪರಿಶೀಲನೆಗಾಗಿ ಆರಿಸಿಕೊಳ್ಳುತ್ತಿದ್ದ ಭಾಷೆ ಅಂದಿನ ಸಾಹಿತ್ಯಭಾಷೆ, ಅಂದು ಪ್ರಚಲಿತವಾಗಿದ್ದ ಶಿಷ್ಟಭಾಷೆ, ಅಂದಿನ ನಗರ ಜೀವಿಗಳು ವ್ಯಾವಹಾರಿಕವಾಗಿ ಬಳಸುತ್ತಿದ್ದ ನಾಗರಿಕ ಭಾಷೆ, ಅಷ್ಟೆ. ಇಪ್ಪತ್ತನೆಯ ಶತಮಾನದ ಮೊದಲ ಹಂತದಲ್ಲಿ ಇದಕ್ಕೊಂದು ಹೊಸ ತಿರುವು ಬಂದು ವಿವರಣಾತ್ಮಕ ಭಾಷಾವಿಜ್ಞಾನ ಬೆಳಕು ಕಂಡಿತು. ಅಂದಿನಿಂದ ಲಿಖಿತ ಮತ್ತು ಅಲಿಖಿತ ಭಾಷೆಗಳ ಶುದ್ಧ ವೈಜ್ಞಾನಿಕ ಅಧ್ಯಯನ ಆರಂಭಗೊಂಡಿತು. ವಿವರಣಾತ್ಮಕ ಭಾಷಾವಿಜ್ಞಾನ ಹೀಗೆ ಆಧುನಿಕ ಭಾಷಾವಿಜ್ಞಾನದ ಉದಯಕ್ಕೆ ಮಾತ್ರವಲ್ಲದೆ ಭಾಷಾವಿಜ್ಞಾನ ಕ್ಷೇತ್ರ ಮತ್ತಷ್ಟು ವಿಪುಲವಾಗಿ ಬೆಳೆದು ವಿಶಾಲಗೊಳ್ಳುವುದಕ್ಕೆ ದಾರಿ ಮಾಡಿಕೊಟ್ಟಿತು. ಅಲ್ಲದೆ, ಐತಿಹಾಸಿಕ ಮತ್ತು ತುಲನಾತ್ಮಕ ಭಾಷಾ ಅಧ್ಯಯನ ಕ್ರಮ ಸಾಕಷ್ಟು ವೈಜ್ಞಾನಿಕವಾಗಿ ಬೆಳೆಯಲು ತುಂಬ ಸಹಾಯಕಾರಿಯಾಯಿತು. ಬೆಟ್ಟಗುಡ್ಡಗಳಲ್ಲಿ ವಾಸಿಸುವ ಜನರ ಲಿಪಿ ಇಲ್ಲದ ಭಾಷೆಗಳು, ಗ್ರಾಮೀಣ ಹಾಗೂ ನಾಗರಿಕ ಜನರ ಆಡುನುಡಿಗಳು, ಕುರುಬ ಕುಂಬಾರ ಅಗಸ ರೈತ ದರ್ಜಿ-ಹೀಗೆ ವೃತ್ತಿನಿರತ ಜನರ ಭಾಷಾವೈಖರಿಗಳು-ಇವನ್ನು ನೇರವಾಗಿ ಆಯಾ ಜನರಿಂದಲೇ ಸಂಗ್ರಹಿಸಿ ವಿಶ್ಲೇಷಿಸುವ ಕೆಲಸ ಕ್ರಮೇಣ ಭಾಷಾ ಶಾಸ್ತ್ರಿಗಳನ್ನು ಆಕರ್ಷಿಸಿತು. ಈ ದಿಕ್ಕಿನಲ್ಲಿ ನಾಇಡಾ, ಕ್ರೋಬರ್, ಗ್ಲೀಸನ್, ಸ್ಪಾಡಿಷ್, ಬ್ಲೂಮ್‍ಫೀಲ್ಡ್, ಹ್ಯಾರಿಸ್ ಹಿಲ್, ಲಾನ್ಸ್‍ಬರಿ, ಸೇನಗುಪ್ತ ಮುಂತಾದ ಅನೇಕ ಭಾಷಾವಿಜ್ಞಾನಿಗಳು ಸಾಕಷ್ಟು ಕೆಲಸ ನಡೆಸಿ, ಭಾಷೆಯ ಶುದ್ಧ ಸಾಮಗ್ರಿಯನ್ನು ಸಂಗ್ರಹಿಸುವ ವಿಧಾನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ. ಅವನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರಕಾರ್ಯಕ್ಕೆ ಅಗತ್ಯವಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಭಾಷಾ ಸಾಮಗ್ರಿಯನ್ನು ಸಂಗ್ರಹಿಸುವ ಸಂಶೋಧಕ ಆ ಭಾಷೆಯನ್ನು ಮಾತೃ ಭಾಷೆಯನ್ನಾಗುಳ್ಳ ಕೆಲವರನ್ನು ತಾನಿದ್ದಲ್ಲಿಗೇ ಬರಮಾಡಿಕೊಂಡು ವಿಷಯ ಸಂಗ್ರಹಣೆ ಮಾಡಬಹುದು. ಆದರದು ಸಮರ್ಪಕವಾಗದು. ಆ ಜನ ಇದ್ದಲ್ಲಿಗೇ ತಾನು ಹೋಗಿ ಅವರೊಡನಿದ್ದು ಅವರ ಮಾತುಕತೆ, ಆಚಾರವಿಚಾರ, ಜೀವನಕ್ರಮ, ನಂಬಿಕೆ ದ್ವೇಷಗಳು, ಮತಧರ್ಮ ವಿಚಾರಗಳು, ಹಬ್ಬಹರಿದಿನಗಳು, ಆಟಪಾಟಗಳು, ವಿನೋದಗಳು, ಹಾಡು ಕುಣಿತಗಳು, ಸಂಗೀತ ನಾಟಕಗಳು-ಇವೆಲ್ಲವನ್ನೂ ಗಮನಿಸುತ್ತ ಇವೆಲ್ಲವುಗಳ ಆಸ್ತಿಭಾರವಾಗಿರುವ ಅವರ ಭಾಷೆಯನ್ನು ಅಧ್ಯಯನ ಮಾಡುವುದೇ ಸರಿಯಾದ ಕ್ರಮ.

ಇಲ್ಲಿ ಭಾಷಾಸಂಶೋಧಕನ ಪಾತ್ರ ಮುಖ್ಯವಾದುದು. ಪ್ರಜ್ಞಾಶೀಲ, ಬುದ್ಧಿಶಾಲಿ, ವಿಚಾರಶೀಲ, ಶ್ರದ್ಧಾಳು ಹಾಗೂ ಪ್ರಾಮಾಣಿಕನಾದ ಸಂಶೋಧಕ ಮಾತ್ರ ಕ್ಷೇತ್ರಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಬಲ್ಲ. ಸ್ಥಳದಲ್ಲಿಯೇ ಇದ್ದುಕೊಂಡು ಆ ಜನರ ಸಹಾಯ ಸಂಪರ್ಕದಿಂದ ಅವರ ಭಾಷೆಯ ವಿವಿಧ ವಿಚಾರಗಳನ್ನು ವಿಭಿನ್ನ ವಾತಾವರಣಗಳಲ್ಲಿ ವೀಕ್ಷಿಸಿ ಯಾವ ತೊಂದರೆಯೂ ಇಲ್ಲದೆ ಪಡೆಯುವಷ್ಟು ಆತ ನಿಷ್ಠಾವಂತ ಹಾಗೂ ಶ್ರಮಜೀವಿಯಾದ ವ್ಯಕ್ತಿಯಾಗಿರಬೇಕಾಗುತ್ತದೆ. ಭಾಷೆಗೂ ಜೀವನಕ್ಕೂ ನಿಕಟ ಸಂಬಂಧವಿದೆಯಾಗಿ ಭಾಷಾಧ್ಯಯನ ಮಾಡುವವನಿಗೆ ಸಮಗ್ರ ಜೀವನದ ಸೂಕ್ಷ್ಮ ಪರಿಚಯ ಇರಬೇಕಾಗುತ್ತದೆ.

ಭಾಷಾಸಾಮಗ್ರಿಯನ್ನು ಮುಖ್ಯವಾಗಿ ಮೂರು ವಿಧಾನಗಳಲ್ಲಿ ಸಂಗ್ರಹಿಸಲಾಗುತ್ತದೆ. ಯಾವ ಒಂದು ಭಾಷೆಯ ಸಾಮಗ್ರಿಯನ್ನು ಸಂಗ್ರಹಿಸಲು ಪ್ರತಿವಕ್ತ (ಸೂಚಕ) ಹಾಗೂ ಸಂಶೋಧಕ ಮಧ್ಯೆ ತಮ್ಮ ತಮ್ಮ ಮಾತೃಭಾಷೆಗಳಲ್ಲದೆ ಬೇರಾವ ಭಾಷಾ ಮಾಧ್ಯಮವೂ ಇಲ್ಲದಿದ್ದಲ್ಲಿ ಅಂಥ ಮಾರ್ಗವನ್ನು ಏಕಭಾಷಿಕ ಪದ್ಧತಿ ಎಂದು ಕರೆದಿದ್ದಾರೆ. ಈ ವಿಧಾನದಲ್ಲಿ ಸಂಗ್ರಹಕಾರ್ಯ ಸ್ವಲ್ಪ ಕಷ್ಟಸಾಧ್ಯ. ಅಂಥ ಸಂದರ್ಭಗಳಲ್ಲಿ ಸಂಶೋಧಕ ತುಂಬ ಚತುರನಾಗಿ ವಿಚಾರಶೀಲನಾಗಿ ಪ್ರಾಮಾಣಿಕನಾಗಿ ನಡೆದುಕೊಳ್ಳುವುದರ ಜೊತೆಗೆ ಚಿತ್ರಗಳನ್ನು ಉಪಯೋಗಿಸಿಕೊಂಡು ಸಾಮಗ್ರಿ ಪಡೆಯಬಹುದು. ಕೆಲವು ವೇಳೆ ತನ್ನ ಮುಂದೆ ಕಂಡ ವಸ್ತುಗಳ ಹೆಸರುಗಳನ್ನು ಅವುಗಳ ಕ್ರಿಯೆಗಳನ್ನು ಪ್ರತಿವಕ್ತನಿಗೆ ಪ್ರತ್ಯಕ್ಷವಾಗಿ ತೋರಿಸಿ ಸಾಮಗ್ರಿಯನ್ನು ಪಡೆಯಬಹುದು. ಚಿತ್ರಗಳನ್ನು ಉಪಯೋಗಿಸಿಕೊಂಡು ಭಾಷಾಸಾಮಗ್ರಿಯನ್ನು ಸಂಗ್ರಹಿಸುವುದು ಭಾಷಾವಿಜ್ಞಾನದಲ್ಲಿ ತುಂಬ ರೂಢಿಯಲ್ಲಿದೆ. ಈ ವಿಧಾನವನ್ನು ಚಿತ್ರಪದ್ಧತಿ ಎಂದು ಕರೆಯಲಾಗಿದೆ. ಈ ವಿಧಾನವೂ ಸಾಕಷ್ಟು ಸಮರ್ಪಕವಾದುದಲ್ಲ. ಪ್ರತಿವಕ್ತ ಹಾಗೂ ಸಂಶೋಧಕರ ಮಧ್ಯೆ ತಮ್ಮ ತಮ್ಮ ಮಾತೃಭಾಷೆಗಳ ಜೊತೆಗೆ ಬೇರೊಂದು ಭಾಷಾಮಾಧ್ಯವೂ ಇದ್ದಲ್ಲಿ ಅಂಥ ವಿಧಾನವನ್ನು ದ್ವಿಭಾಷಿಕಪದ್ಧತಿ ಎನ್ನುತ್ತೇವೆ. ಒಂದಕ್ಕಿಂತ ಹೆಚ್ಚು ಭಾಷೆಗಳ ಮಾಧ್ಯಮವಿದ್ಧಾಗ ಅಂಥ ವಿಧಾನವನ್ನು ಬಹುಭಾಷಿಕಪದ್ಧತಿ ಎನ್ನುತ್ತೇವೆ. ಈ ಎರಡು ವಿಧಾನಗಳೂ ಏಕಭಾಷಿಕ ವಿಧಾನಕ್ಕಿಂತ ಉತ್ತಮ. ಏಕಭಾಷಿಕ ಪದ್ಧತಿ ಮೊದಮೊದಲು ಕ್ಲಿಷ್ಟಕರವಾಗಿ ಕಂಡರೂ ಕ್ರಮೇಣ ಇದರಿಂದ ಅನುಕೂಲಗಳು ಹೆಚ್ಚು. ಈ ದಿಕ್ಕಿನಲ್ಲಿ ಅನೇಕ ಈ ದಿಶೆಯಲ್ಲಿ ನಡೆದಿರುವಷ್ಟು ಸಂಶೋಧನ ಕಾರ್ಯ ಹಾಗೂ ಪ್ರಕಟನೆ ಭಾಷಾ ವಿಜ್ಞಾನದ ಮತ್ತಾವ ವಿಚಾರದ ಬಗ್ಗೆಯೂ ನಡೆದಿಲ್ಲವೆನ್ನಬಹುದು.

ಮೊಟ್ಟಮೊದಲು ಯೂರೋಪಿನ ಕ್ರೈಸ್ತಮತ ಪ್ರಚಾರಕರು ತಮ್ಮ ಮತ ಪ್ರಚಾರಕ್ಕಾಗಿ ಕ್ಷೇತ್ರಕಾರ್ಯದ ಈ ಮಾರ್ಗವನ್ನನುಸರಿಸಿದರು. ದೇಶೀಯ ಭಾಷೆಗಳ ಜ್ಞಾನವನ್ನು ಸಂಪಾದಿಸಿಕೊಂಡು ಆ ಜನರ ಸಂಪರ್ಕವನ್ನು ಆ ಭಾಷಾಮಾಧ್ಯಮದಿಂದಲೇ ಪಡೆದುಕೊಳ್ಳಲು ಅವರು ಮಾಡಿದ ಸಾಹಸ ಸ್ತುತ್ಯರ್ಹವಾದುದು. ಈ ಬಗ್ಗೆ ಬಂದಿರುವ ಅನುಭವ ಭಾಷಾಕಲಿಕೆ ಮತ್ತು ಅಧ್ಯಯನಕ್ಕೆ ಮಾತ್ರವಲ್ಲದೆ ಇತರ ಶಾಸ್ತ್ರಗಳ ಶುದ್ಧ ವೈಜ್ಞಾನಿಕ ಅಧ್ಯಯನಕ್ಕೂ ದಾರಿ ಮಾಡಿಕೊಟ್ಟಿದೆ ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ.

ಅಲಿಖಿತ ಭಾಷಾಸಾಮಗ್ರಿಯನ್ನು ಪಡೆಯಲು ಆ ಭಾಷೆಯನ್ನು ತನ್ನ ಮಾತೃಭಾಷೆಯನ್ನಾಗುಳ್ಳ ಪ್ರತಿವಕ್ತ ಸಹಾಯ ಸಹಕಾರ ಬೇಕಾಗುತ್ತದೆ. ಆತ ಅತಿ ಚತುರನೂ ಪ್ರಾಮಾಣಿಕನೂ ನಿಷ್ಠಾವಂತನೂ ವಾಚಾಳಿಯೂ ಆಗಿದ್ದರೊಳ್ಳೆಯದು. ಹಾಗಲ್ಲದೆ ಆತ ಮಿತಭಾಷಿಯೂ ಸಂಕೋಚಪ್ರವೃತ್ತಿಯವನೂ ಏಕಾಂತಪ್ರಿಯನೂ ತುಂಬ ಗಂಭೀರವ್ಯಕ್ತಿಯೂ ಆಗಿಬಿಟ್ಟರೆ ಅವನಿಂದ ಸುಲಭವಾಗಿ ಉದ್ದಿಷ್ಟ ಸಾಮಗ್ರಿಯನ್ನು ಪಡಿಯಲಾಗುವುದಿಲ್ಲ. ಆತ ಯಾವಾಗಲೂ ಸಹಕರಿಸಬಲ್ಲವನೂ ಸ್ನೇಹಪರನೂ ಹಸನ್ಮುಖಿಯೂ ಉತ್ಸಾಹಿಯೂ ಆಗಿದ್ದರೆ ಒಳ್ಳೆಯದು. ಕೆಲವು ಪ್ರತಿವಕ್ತರಲ್ಲಿ ಆತ್ಮಪ್ರತಿಷ್ಠೆ, ಸಿಡುಕುತನ, ಹಟಮಾರಿತನ, ಬುದ್ಧಿಭ್ರಮಣೆ, ಪಾಂಡಿತ್ಯಗರ್ವ, ಮುಂಗೋಪ ಹಮ್ಮು ಇತ್ಯಾದಿ ಓರೆಕೋರೆಗಳು ಇರಬಹುದು. ಅಂಥ ದುರ್ಗುಣಗಳಿಂದ ದೂರವಿರುವ ವ್ಯಕ್ತಿಯನ್ನೇ ಪ್ರತಿವಕ್ತನನ್ನಾಗಿ ಆರಿಸಿಕೊಳ್ಳುವುದು ಯುಕ್ತ. ಕೆಲವು ವೇಳೆ ವ್ಯಕ್ತಿಯ ಕಿವಿ, ಎದೆ, ಬಾಯಿ, ಹಲ್ಲು ಮತ್ತು ಗಲ್ಲಗಳಲ್ಲಿ ಗಾಯಗಳಿದ್ದು ಉಚ್ಚರಿತ ಸಾಮಗ್ರಿ ಶುದ್ಧವಾಗಿರದೆ ಹೋಗುವುದು ಸಾಧ್ಯ. ಈ ಎಲ್ಲವನ್ನೂ ಗಮನಿಸಿ ಸರಿಯಾದ ಪ್ರತಿವಕ್ತನನ್ನು ಹೋಗುವುದು ಸಾಧ್ಯ. ಈ ಎಲ್ಲವನ್ನೂ ಗಮನಿಸಿ ಸರಿಯಾದ ಪ್ರತಿವಕ್ತನನ್ನು ಆರಿಸುವುದು ಅಗತ್ಯ. ಜೊತೆಗೆ ಪ್ರತಿವಕ್ತನ ವಿದ್ಯೆ, ಕಸಬು, ವಯಸ್ಸು, ಸ್ವಭಾವ, ಜಾತಿ, ಆಚಾರ-ವ್ಯವಹಾರ ಇತರ ಭಾಷಾಜ್ಞಾನ ಇತ್ಯಾದಿಗಳನ್ನು ಗಮನಿಸದೆ ವಿಧಿ ಇಲ್ಲ. ಆರಿಸಿಕೊಂಡ ಪ್ರತಿವಕ್ತ ಆ ಭಾಷೆಯಲ್ಲಿ ಸಾಕಷ್ಟು ಅನುಭವಸ್ಥನಾಗಿರಬೇಕು. ಸಾಕಷ್ಟು ಅನುಭವಸ್ಥನೆನಿಸಿ ಕೊಳ್ಳಬೇಕಾದರೆ ವಯಸ್ಸು ಇಪ್ಪತ್ತೈದಕ್ಕಿಂತ ಹೆಚ್ಚಿರಬೇಕು. ಕಡಿಮೆ ವಯಸ್ಸಿನ ಪ್ರತಿವಕ್ತರಲ್ಲಿ ಆ ಭಾಷೆಯ ಜ್ಞಾನ ಸಾಕಷ್ಟು ಇಲ್ಲದೆ ಇರಲು ಸಾಧ್ಯ. ಮತ್ತೆ ಆರಿಸಿಕೊಂಡ ಪ್ರತಿವಕ್ತನ ವಯಸ್ಸು ಐವತ್ತಕ್ಕಿಂತ ಹೆಚ್ಚಿರಬಾರದು. ಹೆಚ್ಚಿದ್ದರೆ ಸ್ಪಷ್ಟ ಉಚ್ಚಾರಣೆ ಇಲ್ಲದೆ ಹೋಗಬಹುದು. ಕೆಲವು ವೇಳೆ, ಶಿಕ್ಷಣ, ಸಂಸ್ಕøತಿ, ಜಾತಿ, ಕಸಬು ಇತರ ಭಾಷಾಪ್ರಭಾವ-ಇವುಗಳಿಂದಾಗಿ ಪ್ರತಿವಕ್ತರ ಭಾಷೆಯಲ್ಲಿ ಸಾಕಷ್ಟು ವ್ಯತ್ಯಾಸ ಕಾಣಿಸಿಕೊಳ್ಳಬಹುದು. ಅಂಥ ಸಂದರ್ಭದಲ್ಲಿ ಶಿಕ್ಷಿತವರ್ಗಕ್ಕಿಂತ ಆಶಿಕ್ಷಿತವರ್ಗದಿಂದಲೇ ಪ್ರತಿವಕ್ತರನ್ನು ಆಯುವುದು ಒಳ್ಳೆಯದು. ಒಂದೇ ಕಸಬು, ಸಂಸ್ಕøತಿಯ ಜನರಾದರೆ ಉತ್ತಮ. ಒಂದೇ ಜಾತಿಯ, ಒಂದೇ ಸ್ಥಳದ ವಿವಿಧ ಕಸಬಿನ ಜನರ ಭಾಷೆಯಲ್ಲಿಯೂ ವಿಭಿನ್ನ ಕಾರಣಗಳಿಂದ ವ್ಯತ್ಯಾಸ ಇದ್ದೇ ಇರುತ್ತದೆ. ಅಂಥ ವೈಯಕ್ತಿಕ ವ್ಯತ್ಯಾಸ ಸಾಮಾನ್ಯ ಭಾಷೆಯಲ್ಲಿ ವ್ಯತ್ಯಾಸಗಳು ಪ್ರಧಾನವಾಗಿದ್ದಲ್ಲಿ ಸಂಶೋಧಕ ಅವನ್ನು ಕಡೆಗಣಿಸುವಂತಿಲ್ಲವಾದ ಕಾರಣ ಪ್ರತಿವಕ್ತನ ಹೆಸರು, ಜಾತಿ, ಕಸಬು, ಆಚಾರ-ವ್ಯವಹಾರ, ಸಂಸ್ಕøತಿ-ಇತ್ಯಾದಿಗಳ ಬಗ್ಗೆ ಒಂದು ಪುಟ್ಟ ಇತಿಹಾಸವನ್ನೇ ತಯಾರಿಸಿಟ್ಟುಕೊಳ್ಳಬೇಕಾಗುತ್ತದೆ. ಅದೂ ಅಲ್ಲದೆ, ಅಂಥಹವರಿಂದ ಪಡೆದ ಸಾಮಗ್ರಿಯನ್ನು ಕೂಡ ಬೇರೆಬೇರೆಯಾಗಿ ಬರೆದಿಟ್ಟುಕೊಳ್ಳಬೇಕಾಗುತ್ತದೆ. ಅಂಥ ಸಾಮಗ್ರಿ ತುಲನಾತ್ಮಕ ಅಧ್ಯಯನಕ್ಕೆ ತುಂಬ ನೆರವಾಗುವುದರಲ್ಲಿ ಸಂದೇಹವಿಲ್ಲ.

ಭಾಷಾಸಂಶೋಧಕ ಕ್ಷೇತ್ರಕಾರ್ಯದಲ್ಲಿ ನಾನಾರೀತಿಯ ಕಷ್ಟನಷ್ಟಗಳನ್ನು ಎದುರಿಸಬೇಕಾಗುತ್ತದೆ. ಪ್ರತಿವಕ್ತನನ್ನು ಆರಿಸುವಾಗ, ಪ್ರತಿವಕ್ತನೊಡನೆ ವ್ಯವಹರಿಸುವಾಗ, ಭಾಷಾಸಾಮಗ್ರಿಯನ್ನು ಸಂಗ್ರಹಿಸಿ ಬರೆದುಕೊಳ್ಳುವಾಗ-ಹೀಗೆ ಇನ್ನೂ ಅನೇಕ ಸಂದರ್ಭಗಳಲ್ಲಿ ಅನೇಕ ತೊಡಕುಗಳು ಬರಬಹುದು. ಕ್ಷೇತ್ರಕಾರ್ಯವನ್ನು ಆರಂಭಿಸುವ ಮೊದಲು ಆ ಭಾಷಾ ಕ್ಷೇತ್ರದ ಭೌಗೋಳಿಕ ವ್ಯಾಪ್ತಿ ಮತ್ತು ಅದರ ಐತಿಹಾಸಿಕ ಹಿನ್ನೆಲೆಯನ್ನು ತಿಳಿಯಬೇಕಾಗುತ್ತದೆ. ಕ್ಷೇತ್ರಕಾರ್ಯಕ್ಕೆ ಅಗತ್ಯವಾಗಿ ಬೇಕಾಗಬಹುದಾದ ಪ್ರಶ್ನಾವಳಿ, ಟೇಪ್‍ರೆಕಾರ್ಡರ್, ಬ್ಯಾಟರಿ, ರೇಡಿಯೊ, ಫ್ಲಾಸ್ಕ್, ಟಾರ್ಚ್, ಗಡಿಯಾರ, ಪೆನ್ನು, ಪೆನ್ಸಿಲ್ಲು, ಮಸಿ, ಕಾಗದ, ಬರಿಹಾಳೆಯ ಪುಸ್ತಕಗಳು, ದಿನಚರಿ, ವಿವಿಧ ನಕ್ಷೆ ಮತ್ತು ಚಿತ್ರಗಳನ್ನು ಸಿದ್ಧಪಡಿಸಿಕೊಳ್ಳುವುದು ಅನಂತರದ ಕೆಲಸ. ಏಕೆಂದರೆ ಕ್ಷೇತ್ರಕಾರ್ಯ ಕೈಗೊಂಡ ಮೇಲೆ ಕ್ಷೇತ್ರದಲ್ಲಿ ಯಾವ ವಸ್ತುವಿನ ತೊಂದರೆಯೂ ಇರಬಾರದು ಸಾಧ್ಯವಾದರೆ ಆ ಜನರ ಜೀವನ, ಆಚಾರ-ವ್ಯವಹಾರ, ಸಂಸ್ಕøತಿ, ಕಲೆ, ಸಾಹಿತ್ಯ ಇತ್ಯಾದಿಗಳ ಕಡೆಯೂ ಗಮನ ಹರಿಸಿಯೇ ಕ್ಷೇತ್ರಕಾರ್ಯ ಆರಂಭಿಸುವುದು ಉತ್ತಮ. ಭಾಷಾಸಂಶೋಧಕನಲ್ಲಿ ಜಾನಪದ ಸಂಶೋಧಕನ ಅನೇಕ ಲಕ್ಷಣಗಳು ಇರಬೇಕಾಗುತ್ತದೆ. (ನೋಡಿ- ಕ್ಷೇತ್ರಕಾರ್ಯ-(ಜಾನಪದ)) ಚತುರ, ಪ್ರಜ್ಞಾಶೀಲ, ವಾಚಾಳಿ, ಪ್ರಾಮಾಣಿಕ, ಬುದ್ಧಿಶಾಲಿ, ಶ್ರಮಜೀವಿ, ನಿಷ್ಠಾವಂತ ಎನಿಸಿಕೊಂಡವ ಉತ್ತಮ ಸಂಶೋಧಕನಾಗಬಲ್ಲ. ಭಾಷಾ ಪ್ರತಿವಕ್ತರೊಡನೆ ವ್ಯವಹರಿಸುವಾಗಲಂತೂ ಈತ ಹಸನ್ಮುಖದಿಂದ, ಸ್ನೇಹವಿಶ್ವಾಸದಿಂದ ನಡೆದುಕೊಳ್ಳುವುದಲ್ಲದೆ ಅವನ ಮನೆ, ಮಠ, ಉಡಿಗೆತೊಡಿಗೆ, ಆಚಾರವ್ಯವಹಾರ, ಜನಜೀವನ ಎಷ್ಟೇ ಕೀಳುಮಟ್ಟದ್ದಾಗಿದ್ದರೂ ಅವನ್ನು ಮರೆತು, ಅವನಿಗೆ ಅಡಿಗಡಿಗೆ ಪ್ರೋತ್ಸಾಹ ನೀಡುತ್ತ ಅತಿ ಚುರುಕಾಗಿ ಕಾರ್ಯಸಾಧನೆ ಮಾಡಬೇಕಾಗುತ್ತದೆ. ಪ್ರತಿವಕ್ತ ಮತ್ತು ಸಂಶೋಧಕರ ಮಧ್ಯೆ ಯಾವ ತಪ್ಪುಗ್ರಹಿಕೆಗೂ ಅವಕಾಶವಾಗಬಾರದು. ಅನಾವಶ್ಯಕವಾದ ಯಾವ ಚರ್ಚೆಗೂ ಆಸ್ಪದವಿಲ್ಲದಂತೆ ನೋಡಿಕೊಳ್ಳಬೇಕು. ಯಾವ ಪ್ರತಿವಕ್ತನನ್ನೇ ಆಗಲಿ ದಿನಕ್ಕೆ ಎರಡು ಅಥವಾ ಮೂರು ಗಂಟೆಗಿಂತ ಹೆಚ್ಚು ಉಪಯೋಗಿಸಿಕೊಳ್ಳಬಾರದು. ಮಧ್ಯೆ ಮಧ್ಯೆ ಉಪಾಹಾರ, ವಿಶ್ರಾಂತಿ, ಸಂಗೀತ, ಕಾಫಿ ಇತ್ಯಾದಿಗಳಿಗೆ ಅವಕಾಶ ನೀಡುತ್ತಿರಬೇಕು. ಪ್ರತಿವಕ್ತನಿಗೆ ಯಾವ ವಿಧದಲ್ಲಿಯೂ ಬೇಸರವಾಗದಂತೆ ನೋಡಿಕೊಳ್ಳುವುದು ಇವೆಲ್ಲದರ ಉದ್ದೇಶ. ಎಲ್ಲಕ್ಕಿಂತ ಹೆಚ್ಚಾಗಿ ಸಂಶೋಧಕನಿಗೆ ಭಾಷಾವಿಜ್ಞಾನದ ಜ್ಞಾನ ಅದರಲ್ಲೂ ಧ್ವನಿವಿಜ್ಞಾನದ ಜ್ಞಾನ ಅತ್ಯಗತ್ಯ. ಪ್ರತಿವಕ್ತರ ಬಾಯಿಂದ ಹೊರಬಿದ್ದ ಪದ, ವಾಕ್ಯಗಳಲ್ಲಿನ ಧ್ವನಿಯನ್ನು ಅತಿಸೂಕ್ಷ್ಮವಾಗಿ ಗ್ರಹಿಸುವ ಶಕ್ತಿ ಪಡೆದಿದ್ದು ಉಚ್ಚರಿತ ಧ್ವನಿಯ ಸ್ಥಾನ, ಸ್ವರೂಪ, ಇತ್ಯಾದಿಗಳನ್ನು ವೈಜ್ಞಾನಿಕವಾಗಿ ನಿರ್ಧರಿಸಿ ಅಂತರರಾಷ್ಟ್ರೀಯ ಧ್ವನಿಚಿಹ್ನೆಯನ್ನು ಬಳಸಿ ಸ್ಪಷ್ಟವಾಗಿ ಬರೆದುಕೊಳ್ಳುವಷ್ಟು ಸಮರ್ಥನಾಗಿರಬೇಕು, ಸಂಶೋಧಕ. ಧ್ವನಿ ಸಂಬಂಧಿ ಅನುನಾಸಿಕತೆ, ಮಾತ್ರಾಕಾಲ, ಅಲ್ಪ ಪ್ರಾಣ, ಮಹಾಪ್ರಾಣ, ಸ್ವರಲಹರಿ, ಸ್ವರಾಘಾತ (ಪಿಚ್), ಬಲಾಘಾತ (ಸ್ಟ್ರೆಸ್), ಸಮಾಸ, ಸಂಧಿ, ಧ್ವನಿಯ ಕಠಿಣತೆ, ಶಿಥಿಲತೆ ಇತ್ಯಾದಿಗಳನ್ನು ಸೂಕ್ಷ್ಮವಾಗಿ ನಿರ್ಧರಿಸುವಷ್ಟು ಜ್ಞಾನ ಭಾಷಾಸಂಶೋಧಕನಿಗೆ ಅಗತ್ಯ. ಅದಿಲ್ಲದಿದ್ದಲ್ಲಿ ಪ್ರಾಮಾಣಿಕ ಭಾಷಾಸಾಮಗ್ರಿಯ ಸಂಗ್ರಹ ಬಹಳ ಕಷ್ಟಕರವಾಗುತ್ತದೆ. ಅಂತರರಾಷ್ಟ್ರೀಯ ಧ್ವನಿಚಿಹ್ನೆಯನ್ನು ಬಳಸುವುದು ಭಾಷಾವಿಜ್ಞಾನದಲ್ಲಿ ರೂಢಿ. ಅಲಿಖಿತ ಭಾಷಾಸಾಮಗ್ರಿಯನ್ನು ಸಂಗ್ರಹಿಸುವಾಗ ಬರೆದುಕೊಳ್ಳಲು ಈ ಧ್ವನಿಲಿಪಿಯನ್ನು ಬಿಟ್ಟರೆ ಸದ್ಯಕ್ಕೆ ಮತ್ತಾವ ಲಿಪಿಯೂ ಸೂಕ್ತವಲ್ಲ. ಇಂಥ ಲಿಪಿಯ ಬಳಕೆಯಲ್ಲಿಯೂ ಕೆಲವು ಕುಂದುಕೊರತೆಗಳು ಇಲ್ಲದಿಲ್ಲ. ಕೆಲವು ವೇಳೆ ಅಂತರರಾಷ್ಟ್ರೀಯ ಧ್ವನಿಮಾಲೆಯಲ್ಲಿ ಇಲ್ಲದ ಕೆಲವು ಧ್ವನಿಗಳು ಕೆಲವು ಭಾಷೆಯಲ್ಲಿ ಕಂಡು ಬರುವ ಸಂಭವವೂ ಉಂಟು. ಅಂಥ ಸಂದರ್ಭದಲ್ಲಿ ವಿಶೇಷ ಚಿಹ್ನೆಗಳನ್ನು ಬಳಸಿ ಅವನ್ನು ಸುಲಭವಾಗಿ ಪತ್ತೆಹಚ್ಚುವಂತೆ ಬರೆದುಕೊಳ್ಳಬೇಕಾಗುವುದು. ಒಂದು ವೇಳೆ ಪ್ರತಿವಕ್ತರ ಉಚ್ಚಾರಣೆ ಅತಿವೇಗವಾಗಿದ್ದಲ್ಲಿ ಟೇಪ್‍ರೆಕಾರ್ಡರನ್ನು ಬಳಸಬಹುದು. ಕ್ಷೇತ್ರಕಾರ್ಯದಲ್ಲಿ ಅತಿ ವೈಜ್ಞಾನಿಕವಾಗಿ ಸಾಮಗ್ರಿಯನ್ನು ಪಡೆಯಲು ಟೇಪ್‍ರೆಕಾರ್ಡರ್ ಉತ್ತಮ ಸಾಧನವೆನಿಸಿಕೊಂಡಿದೆ. ಕತೆ, ಗಾದೆ, ಗೀತೆ ಮತ್ತು ಒಗಟುಗಳನ್ನು ಪ್ರತಿವಕ್ತರಿಂದ ಕೇಳಿ ನೇರವಾಗಿ ಬರೆದುಕೊಳ್ಳುವುದು ಸ್ವಲ್ಪ ಕ್ಲಿಷ್ಟವಾದುದರಿಂದ ಟೇಪ್‍ರೆಕಾರ್ಡರ್ ಬಳಕೆ ಒಳ್ಳೆಯದು. ಇಲ್ಲಿ ಧ್ವನಿಸಂಬಂಧಿ ಸ್ವರಲಹರಿ, ಸ್ವರಾಘಾತ, ಸಂಗಮ ಇತ್ಯಾದಿ ವಿಚಾರಗಳು ಬಿಟ್ಟುಹೋಗುವುವೆಂಬ ಭಯವಿರುವುದಿಲ್ಲ. ಸಾಮಗ್ರಿಯನ್ನು ಸಂಗ್ರಹಿಸುವಾಗ ಆಯಾ ಭಾಷೆಯ ಜಾಯಮಾನಕ್ಕೆ ತಕ್ಕ ಪ್ರಶ್ನಾವಳಿಗಳನ್ನು ತಯಾರಿಸಿಕೊಳ್ಳಬೇಕಾಗುತ್ತದೆ. ಮುಖ್ಯವಾಗಿ ಪ್ರಶ್ನಾವಳಿ ಸರಳವಾಗಿದ್ದು ಭಾಷೆಯ ಪೂರ್ಣ ಸಾಮಗ್ರಿಯನ್ನು ಸಂಗ್ರಹಿಸಲು ನೆರವಾಗುವಂತಿರಬೇಕು. ಕ್ಷೇತ್ರಕಾರ್ಯದಲ್ಲಿ ಪ್ರಾಯೋಗಿಕವಾಗಿ ಎಷ್ಟೋ ಹೊಸ ಹೊಸ ವಿಚಾರಗಳು ತಿಳಿದುಬರುತ್ತವೆ. ಅಂಥ ವಿಚಾರಗಳನ್ನು ಪ್ರಶ್ನಾವಳಿಗೆ ಸೇರಿಸಬೇಕಾಗಬಹುದು. ಕ್ಲಿಷ್ಟಕರವಾದ, ಅರ್ಥವಾಗದ, ಅಪೂರ್ವ ಪದಗಳಿಗೆ ಇಲ್ಲಿ ಸ್ಥಾನವೇ ಇಲ್ಲ. ಕೆಲವು ವೇಳೆ ಪ್ರಶ್ನಾವಳಿಗೆ ಬದಲು ಚಿತ್ರ ಮತ್ತು ನಕ್ಷೆಗಳನ್ನು ಉಪಯೋಗಿಸಬೇಕಾಗುವುದು. ಕತೆ, ಗಾದೆ, ಗೀತೆ ಮತ್ತು ಒಗಟುಗಳನ್ನು ಸಂಗ್ರಹಿಸುವಾಗ ಯಾವ ಪ್ರಶ್ನಾವಳಿಯ ಅವಶ್ಯಕತೆಯೂ ಕಂಡುಬರುವುದಿಲ್ಲ. ಪ್ರಶ್ನಾವಳಿಯಲ್ಲಿ ದಿನಚರಿಯ ಮಾಮೂಲಿ ವಸ್ತುಗಳ ಹೆಸರುಗಳು, ವ್ಯಾಕರಣ ಸಂಬಂಧಿ ನಾಮಪದ, ಕ್ರಿಯಾಪದ, ಸರ್ವನಾಮ, ಕ್ರಿಯಾವಿಶೇಷಣ, ಗುಣವಾಚಕ, ಸಂಖ್ಯಾವಾಚಕ ಹಾಗೂ ಲಿಂಗವಚನ, ವಿಭಕ್ತಿ, ಕಾಲ, ವಿಧಿ, ಕರ್ಮಣಿ ಮತ್ತು ಕರ್ತರಿ ಪ್ರಯೋಗಗಳು ಕ್ರಮವಾಗಿ ಸೂಚಿತವಾಗಿರಬೇಕು. ಇತ್ತೀಚೆಗೆ ಇಂಗ್ಲೆಂಡ್, ರಷ್ಯ ಮತ್ತು ಅಮೆರಿಕ ಮುಂತಾದ ದೇಶಗಳ ಭಾಷಾವಿಜ್ಞಾನಿಗಳು ಯಾವ ಪ್ರಶ್ನಾವಳಿಯನ್ನೂ ಬಳಸದೆ, ಕತೆ, ಗಾದೆ ಮತ್ತು ಗೀತೆಗಳನ್ನು ವಿಶೇಷವಾಗಿ ಸಂಗ್ರಹಿಸಿ ಆ ಭಾಷೆಯನ್ನು ಆಧುನಿಕ ಭಾಷಾವಿಜ್ಞಾದನ ತತ್ತ್ವಗಳ ಆಧಾರದ ಮೇಲೆ ವಿಶ್ಲೇಷಿಸಿ ತುಂಬ ವೈಜ್ಞಾನಿಕ ರೀತಿಯಲ್ಲಿ ಗ್ರಂಥ ಹಾಗೂ ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. 							 			(ಕೆ.ಕೆ.ಜಿ.)